ಹುಬ್ಬಳ್ಳಿ : ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ಸ್ಟಾಪ್ ಬಳಿ ಡಾಲರ್ಸ್ ಕಾಲೋನಿಗೆ ಹೋಗುವ ರಸ್ತೆಯಲ್ಲಿ ಸೆಕ್ಯೂರ್ ಆಸ್ಪತ್ರೆ ಇದ್ದು, ಈ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ.
ಬಸ್ ಸ್ಟಾಪ್ ಒಳಗಡೆ ಪಾರ್ಕಿಂಗ್‌ಗೆಂದೇ ಪ್ರತ್ಯೇಕ ಸ್ಥಳವಿದ್ದರೂ, ಚಾಲಕರು ಬಸ್ ಸ್ಟಾಪ್‌ನ ಹೊರಗಡೆ ರಸ್ತೆ ಬದಿಯಲ್ಲೇ ಗಾಡಿಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಆಸ್ಪತ್ರೆಗೆ ತೆರಳುವ ಆಂಬುಲೆನ್ಸ್‌ಗಳ ಸಂಚಾರಕ್ಕೂ ತೊಂದರೆಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳ ಜೀವಕ್ಕೆ ಅಪಾಯ ಎದುರಾಗುವ ಆತಂಕವಿದೆ.
ಇನ್ನು ಪಾದಚಾರಿಗಳು ಓಡಾಡುವ ಫುಟ್‌ಪಾತ್‌ನಲ್ಲೂ ತಳ್ಳುಗಾಡಿಗಳು ಮತ್ತು ಅಂಗಡಿಗಳನ್ನು ಹಾಕಲಾಗಿದ್ದು, ಸಾರ್ವಜನಿಕರು ರಸ್ತೆಯಲ್ಲೇ ನಡೆದಾಡುವಂತಾಗಿದೆ.
ಈ ಬಗ್ಗೆ ಟ್ರಾಫಿಕ್ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧಪಟ್ಟ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ತಕ್ಷಣ ಗಮನಹರಿಸಿ, ಅಕ್ರಮ ಪಾರ್ಕಿಂಗ್ ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




