ಬೆಂಗಳೂರು: ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಆಹಾರ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳದೆ, ಮೊಬೈಲ್‌ನಲ್ಲೇ Face Authentication ಮೂಲಕ ಇ-ಕೆವೈಸಿ ಪೂರ್ಣಗೊಳಿಸುವ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ.
ಈ ಸಂಬಂಧ ಹೊಸ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಇನ್ನೊಂದು ವಾರದೊಳಗೆ ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಫಲಾನುಭವಿಗಳು ತಮ್ಮ ಮೊಬೈಲ್‌ನಲ್ಲೇ ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಐದು ವರ್ಷ ಪೂರ್ಣಗೊಂಡಿರುವ 2.67 ಕೋಟಿ ಫಲಾನುಭವಿಗಳಿಗೆ ಮರು ಇ-ಕೆವೈಸಿ ಕಡ್ಡಾಯವಾಗಿದ್ದು, ಸೆಪ್ಟೆಂಬರ್ 30, 2026 ಅಂತಿಮ ದಿನಾಂಕ ನಿಗದಿಯಾಗಿದೆ. ಈವರೆಗೆ 97.54 ಲಕ್ಷ ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸಿದ್ದು, ಶೇ.37ರಷ್ಟು ಪ್ರಕ್ರಿಯೆ ಮುಗಿದಿದೆ.
ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೆಲವೆಡೆ ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಸಮಸ್ಯೆಗಳಿಗೆ ತುರ್ತು ಪರಿಹಾರ ನೀಡುವುದರ ಜೊತೆಗೆ, ಆಹಾರ ಇಲಾಖೆಯ ಸರ್ವರ್ ಸಾಮರ್ಥ್ಯ ಹೆಚ್ಚಿಸಲು Load Testing ನಡೆಸಲಾಗುತ್ತಿದೆ.
ಮುಂದಿನ ಒಂದು ತಿಂಗಳೊಳಗೆ ಸರ್ವರ್ ಮತ್ತು ತಾಂತ್ರಿಕ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಇಲಾಖೆ ತಿಳಿಸಿದೆ.




