ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಧನಂಜಯ್ ನೀಡಿದ್ದ ಹೇಳಿಕೆಯ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿವಾದಿತ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಯೂಟ್ಯೂಬರ್ ಮಂಜು ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ವಿಡಿಯೋ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ, ಎಫ್ಐಆರ್ ದಾಖಲಾಗಿರುವ ಬೆನ್ನಲ್ಲೇ ಯೂಟ್ಯೂಬರ್ ಮಂಜು ಇನ್ಸ್ಪೆಕ್ಟರ್ ಧನಂಜಯ್ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ತಾವು ಸ್ವಯಂಪ್ರೇರಿತವಾಗಿ ಠಾಣೆಗೆ ತೆರಳಿ ವಿಡಿಯೋ ಮಾಡಿಲ್ಲ. ಕಾನ್ಸ್ಟೇಬಲ್ ಯಶ್ವಂತ್ ಅವರ ಮೂಲಕ ತಮ್ಮನ್ನು ಠಾಣೆಗೆ ಕರೆಸಲಾಗಿತ್ತು. ಗಣಪತಿ ವಿಸರ್ಜನೆಗೆ ಸಂಬಂಧಿಸಿದ ಚರ್ಚೆ ನಡೆಯಲಿದ್ದು, ಅದನ್ನು ವಿಡಿಯೋ ಚಿತ್ರೀಕರಿಸುವಂತೆ ಇನ್ಸ್ಪೆಕ್ಟರ್ ಧನಂಜಯ್ ಅವರೇ ಸೂಚಿಸಿದ್ದರು ಎಂದು ಮಂಜು ಆರೋಪಿಸಿದ್ದಾರೆ.
ಗಣಪತಿ ವಿಸರ್ಜನೆ ಮೆರವಣಿಗೆಯ ಮಾರ್ಗ ಸೇರಿದಂತೆ ಹಲವು ವಿಚಾರಗಳ ಕುರಿತು ನಡೆದ ಚರ್ಚೆಯಲ್ಲಿ ಮಸೀದಿ ವಿಚಾರವೂ ಪ್ರಸ್ತಾಪವಾಗಿತ್ತು ಎಂದು ಮಂಜು ಹೇಳಿದ್ದಾರೆ. ಚರ್ಚೆಯ ವೇಳೆ ತಾವು ವಿಡಿಯೋ ಚಿತ್ರೀಕರಿಸಿದ್ದು, ಅದನ್ನು ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಧನಂಜಯ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಅಲ್ಲದೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಯಾವುದೇ ರೀತಿಯ ಎಚ್ಚರಿಕೆ ಅಥವಾ ಸೂಚನೆಯನ್ನೂ ನೀಡಿರಲಿಲ್ಲ ಎಂದು ಮಂಜು ತಿಳಿಸಿದ್ದಾರೆ.
ಇದೀಗ ಅದೇ ವಿಡಿಯೋ ಆಧರಿಸಿ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಮಂಜು ಹೇಳಿದ್ದಾರೆ. ವಿವಾದಿತ ಹೇಳಿಕೆ ತಮ್ಮಿಂದ ಬಂದದ್ದಲ್ಲ, ತಾವು ಕೇವಲ ಅಧಿಕಾರಿಗಳ ಸೂಚನೆಯಂತೆ ನಡೆದ ಚರ್ಚೆಯನ್ನು ಚಿತ್ರೀಕರಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಇನ್ಸ್ಪೆಕ್ಟರ್ ಧನಂಜಯ್ ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಮಂಜು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದ್ದು, ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.




