ಹುಬ್ಬಳ್ಳಿ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಬಂದ್ ಆಗುವ ಮುನ್ನವೇ ಗೋವಾ ಮದ್ಯ ಸಾಗಾಟ ನಡೆದಿತ್ತಾ ಎಂಬ ಅನುಮಾನ ಮೂಡಿದೆ. ಹುಬ್ಬಳ್ಳಿಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 152.380 ಲೀಟರ್ ಗೋವಾ ಮದ್ಯ ಸೇರಿದಂತೆ ಒಟ್ಟು 17,00,615 ರೂಪಾಯಿ ಮೌಲ್ಯದ ಮದ್ಯ, ಮೊಬೈಲ್ ಹಾಗೂ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಸೆಪ್ಟೆಂಬರ್ 10ರಂದು ಬೆಳಗಿನ ಜಾವ 2.20ರ ವೇಳೆಗೆ ಉದ್ಯಮನಗರ ಲೇಔಟ್‌ನ ನಿರ್ಮಾಣ ಹಂತದ ರಸ್ತೆಯಲ್ಲಿ ದಾಳಿ ನಡೆದಿದ್ದು, ಹುಂಡೈ ಎಲಾಂಟ್ರಾ ಕಾರು ಹಾಗೂ ಸುಜುಕಿ ಆಕ್ಸೆಸ್ ಬೈಕ್‌ನಲ್ಲಿ ಮದ್ಯ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಮದ್ಯದಂಗಡಿಗಳು ಬಂದ್ ಇರುವ ಕಾರಣಕ್ಕೆ ಮುಂಚಿತವಾಗಿ ಮದ್ಯ ಸಂಗ್ರಹಿಸಲಾಗುತ್ತಿತ್ತೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಆದರೆ, ಈ ಸಾಗಾಟಕ್ಕೂ ಹಬ್ಬದ ಮದ್ಯ ಮಾರಾಟ ನಿಷೇಧಕ್ಕೂ ನೇರ ಸಂಬಂಧವಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣಸಾ ಪರಶುರಾಮ ಕಠಾರೆ ವಿರುದ್ಧ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಮದ್ಯವನ್ನು ಎಲ್ಲಿಗೆ ಮತ್ತು ಯಾರಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.




