ಹುಬ್ಬಳ್ಳಿ;ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಎಫ್‌ಬಿಟಿ ಕಂಪನಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದಿದೆ.
ಎಫ್-1 ಹಂತದಲ್ಲಿ 18 ಸಾವಿರ ಹೂಡಿಕೆ ಮಾಡಿದರೆ ತಿಂಗಳಿಗೆ 2 ಸಾವಿರ ಆದಾಯ ಎಂದು ಭರವಸೆ ನೀಡಲಾಗಿತ್ತು. ಎಫ್-2 ಹಂತದಲ್ಲಿ ಹೆಚ್ಚು ಹೂಡಿಕೆ ಮಾಡಿದರೆ ಇನ್ನೂ ಹೆಚ್ಚು ಲಾಭ, ಎಫ್-4 ಹಂತಕ್ಕೆ ಹೋದರೆ ಉಚಿತ ಕಾರು, ಬೈಕ್ ಸಿಗುತ್ತದೆ ಎಂದು ಆಸೆ ತೋರಿಸಲಾಗಿತ್ತು.
ಆರಂಭದಲ್ಲಿ ಒಂದೆರಡು ತಿಂಗಳು ಹಣ ನೀಡಿ ನಂಬಿಕೆ ಗಳಿಸಲಾಗಿತ್ತು. ಇದನ್ನೇ ನಂಬಿದ ಬಡ ಜನರು ಸಾಲ ಮಾಡಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಈಗ ಆ್ಯಪ್ ಬಂದ್ ಆಗಿದ್ದು, ಕಂಪನಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಕರೆ ಮಾಡಿದರೆ ದೆಹಲಿ ಕಡೆಯಿಂದಲೇ ಉತ್ತರ ಬರುತ್ತಿದೆ.
ಇದು ಹೊಸ ಮಾದರಿಯಲ್ಲ, ತಮಿಳುನಾಡಿನಲ್ಲಿ ಎಫ್‌ಕ್ಯೂಎಲ್ ಹೆಸರಲ್ಲಿ 40 ದಿನದಲ್ಲಿ ಹಣ ಡಬಲ್ ಎಂದು ಹೇಳಿ ನಡೆದಿದ್ದ ವಂಚನೆ ಪ್ರಕರಣ ಈಗ ಆರ್ಥಿಕ ಅಪರಾಧಗಳ ವಿಭಾಗದ ತನಿಖೆಯಲ್ಲಿದೆ. ಕರ್ನಾಟಕದಲ್ಲೂ ನಕಲಿ ಆ್ಯಪ್‌ಗಳ ಮೂಲಕ ಕೋಟ್ಯಂತರ ರೂಪಾಯಿ ವಂಚನೆಯಾಗಿದೆ.
ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಕಲಘಟಗಿಯ ಸಂತ್ರಸ್ತರು ಇಂದು ಹುಬ್ಬಳ್ಳಿಯ ಬಂಡಿಗೇರಿ ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ತನಿಖೆಗೆ ಒತ್ತಾಯಿಸಿದ್ದಾರೆ.




