ಉತ್ತರ ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆ ಸಿಕ್ಕಿದೆ. ಹುಬ್ಬಳ್ಳಿಯ ಗಬ್ಬೂರಿನಲ್ಲಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ KLEಯ ನೂತನ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಇದೀಗ ಲೋಕಾರ್ಪಣೆಗೆ ಸಜ್ಜಾಗಿದೆ.
ಸೆಪ್ಟೆಂಬರ್ 19ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬೃಹತ್ ವೈದ್ಯಕೀಯ ಕ್ಯಾಂಪಸ್ನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಹುಬ್ಬಳ್ಳಿಯ ಗಬ್ಬೂರಿನಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ, 30 ಲಕ್ಷ ಚದರ ಅಡಿಗೂ ಅಧಿಕ ವಿಸ್ತೀರ್ಣದಲ್ಲಿ ಈ ಬೃಹತ್ ವೈದ್ಯಕೀಯ ಕ್ಯಾಂಪಸ್ ನಿರ್ಮಾಣಗೊಂಡಿದೆ. ಸುಮಾರು 1,200 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಳಿಗೆ ಆದ್ಯತೆ ನೀಡಲಾಗಿದೆ.
ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಮೂತ್ರಪಿಂಡ ಕಾಯಿಲೆ, ನರರೋಗ, ಜಠರ ಸಂಬಂಧಿ ಕಾಯಿಲೆ ಹಾಗೂ ತಾಯಿ-ಮಕ್ಕಳ ಆರೋಗ್ಯ ಸೇವೆಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಅತ್ಯಾಧುನಿಕ ಕ್ಯಾಥ್ಲ್ಯಾಬ್, ಮಾಡ್ಯುಲರ್ ಆಪರೇಷನ್ ಥಿಯೇಟರ್, ಐಸಿಯು, ನವಜಾತ ಶಿಶುಗಳ ಐಸಿಯು, ಮಕ್ಕಳ ಐಸಿಯು, ಡಯಾಲಿಸಿಸ್, ಆಧುನಿಕ ರೇಡಿಯಾಲಜಿ ಹಾಗೂ ಸುಧಾರಿತ ಪ್ರಯೋಗಾಲಯ ಸೇವೆಗಳು ಇಲ್ಲಿ ಲಭ್ಯವಾಗಲಿವೆ.
ಆಸ್ಪತ್ರೆಯ ಜೊತೆಗೆ ವೈದ್ಯಕೀಯ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿವರ್ಷ ಸುಮಾರು 800 ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ 20 ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ.
ವಿದ್ಯಾರ್ಥಿಗಳಿಗೆ ತುರ್ತು ಪರಿಸ್ಥಿತಿಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲು 35 ಕೋಟಿ ರೂಪಾಯಿ ವೆಚ್ಚದಲ್ಲಿ AI ಆಧಾರಿತ ಸ್ಕಿಲ್ ಲ್ಯಾಬ್ ಸ್ಥಾಪಿಸಲಾಗಿದೆ.
ಹೃದಯಾಘಾತ, ಅಪಘಾತ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಹೇಗೆ ತಕ್ಷಣ ಸ್ಪಂದಿಸಬೇಕು ಎಂಬುದನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಈ ವ್ಯವಸ್ಥೆ ನೆರವಾಗಲಿದೆ.
ಈಗಾಗಲೇ ಆಸ್ಪತ್ರೆ ಸೇವೆ ಆರಂಭಿಸಿದ್ದು, ಪ್ರತಿದಿನ ಸಾವಿರಕ್ಕೂ ಅಧಿಕ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 200ಕ್ಕೂ ಅಧಿಕ ಹೆರಿಗೆಗಳು ನಡೆದಿವೆ ಎಂದು KLE ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಕುಲಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ತಿಳಿಸಿದ್ದಾರೆ.
ಇದರ ಜೊತೆಗೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಿಗೂ ತಜ್ಞ ವೈದ್ಯರ ತಂಡಗಳನ್ನು ಕಳುಹಿಸಿ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಹೊಂದಲಾಗಿದೆ
ಒಟ್ಟಿನಲ್ಲಿ, ಚಿಕಿತ್ಸೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯನ್ನು ಒಂದೇ ವೇದಿಕೆಯಡಿ ಜೋಡಿಸಿರುವ ಈ ಬೃಹತ್ ಕ್ಯಾಂಪಸ್ ಉತ್ತರ ಕರ್ನಾಟಕದ ಆರೋಗ್ಯ ಸೇವೆಗೆ ಹೊಸ ಆಯಾಮ ನೀಡುವ ಉದ್ದೇಶ ಹೊಂದಿದೆ.




