ಹುಬ್ಬಳ್ಳಿ:ಬೈರಿದೇವರಕೊಪ್ಪದಲ್ಲಿ ನಿನ್ನೆ ಮಧ್ಯರಾತ್ರಿ ಅಂಗಡಿ ಕಳ್ಳತನದ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ರಾತ್ರಿ ಸುಮಾರು 2 ಗಂಟೆಗೆ ವಿನಾಯಕ್ ಎಂಬುವವರಿಗೆ ಸೇರಿದ ಸಣ್ಣ ಅಂಗಡಿಯನ್ನು ಗುರಿಯಾಗಿಸಿಕೊಂಡ ಕಳ್ಳರು, ಯಾರೂ ಇಲ್ಲದ ಸಮಯ ನೋಡಿ ಬೀಗ ಮುರಿದು ಒಳನುಗ್ಗಿದ್ದಾರೆ. ಅಂಗಡಿಯಲ್ಲಿದ್ದ ನಗದು, ದಿನಸಿ ಹಾಗೂ ಬೆಲೆಬಾಳುವ ವಸ್ತುಗಳನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ.
ಈ ಸಂಪೂರ್ಣ ಕೃತ್ಯ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಾವಳಿಯಲ್ಲಿ ಇಬ್ಬರು ಕಳ್ಳರು ಮುಖ ಮುಚ್ಚಿಕೊಂಡು ಅಂಗಡಿಯೊಳಗೆ ನುಗ್ಗಿ ದೋಚುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಬೆಳಿಗ್ಗೆ ಅಂಗಡಿ ತೆರೆದಾಗ ಕಳ್ಳತನ ಬೆಳಕಿಗೆ ಬಂದಿದೆ. ತಕ್ಷಣ ಮಾಲೀಕ ವಿನಾಯಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಗುರುತು ಪತ್ತೆಗೆ ಬಲೆ ಬೀಸಿದ್ದಾರೆ. ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ಪರಿಶೀಲನೆಯೂ ನಡೆಯುತ್ತಿದೆ. ಇತ್ತೀಚೆಗೆ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ಹೆಚ್ಚಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.




