ಹುಬ್ಬಳ್ಳಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದಲ್ಲಿ ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆಗೆ ಪೊಲೀಸ್ ಇಲಾಖೆ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶೃತಿ ಎನ್.ಎಸ್., IPS ಅವರು ನಗರದ ವಿವಿಧ ಗಣೇಶ ಪ್ರತಿಷ್ಠಾಪನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರ ಓಡಾಟ, ವಾಹನ ಸಂಚಾರ, ಭದ್ರತಾ ವ್ಯವಸ್ಥೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಿದ ಅವರು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಗಣೇಶೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಸೇರುವ ಸಾಧ್ಯತೆ ಇರುವುದರಿಂದ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ ಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಸಾರ್ವಜನಿಕರು ಮತ್ತು ಗಣೇಶೋತ್ಸವ ಸಮಿತಿಗಳು ಪೊಲೀಸರೊಂದಿಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.




