ರೈಲಿನಲ್ಲಿ ಸಿಗುವ ಆಹಾರ ಸುರಕ್ಷಿತ ಎಂದು ನಂಬಿ ತಿನ್ನುವ ಪ್ರಯಾಣಿಕರಿಗೆ ಇದು ಆತಂಕಕಾರಿ ಸುದ್ದಿ. ಎಕ್ಸ್ಪೈರಿ ಡೇಟ್ ಮೀರಿದ ಸೂಪ್ ಪ್ಯಾಕೆಟ್ಗಳನ್ನು ನೀಡಿ ಪ್ರಯಾಣಿಕರ ಆರೋಗ್ಯದೊಂದಿಗೆ ಚೆಲ್ಲಾಟ ನಡೆಸಿರುವ ಆರೋಪ ಕೇಳಿಬಂದಿದೆ.
ನಿಜಾಮುದ್ದಿನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರಿಗೆ ನೀಡಲಾದ ಸೂಪ್ ಪ್ಯಾಕೆಟ್ನ ಅವಧಿ ಮುಗಿದಿರುವುದು ಬೆಳಕಿಗೆ ಬಂದಿದೆ. ಆಹಾರ ಸೇವಿಸುವ ಮುನ್ನ ಪ್ಯಾಕೆಟ್ ಪರಿಶೀಲಿಸಿದ ಪ್ರಯಾಣಿಕರು ತಕ್ಷಣವೇ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮ್ಯಾನೇಜರ್ ನಿರ್ಲಕ್ಷ್ಯ ಹಾಗೂ ಜವಾಬ್ದಾರಿಯಿಲ್ಲದ ವರ್ತನೆ ತೋರಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರೈಲಿನಲ್ಲಿ ಆಹಾರ ಪೂರೈಕೆಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸಾವಿರಾರು ಪ್ರಯಾಣಿಕರು ಪ್ರತಿದಿನ ರೈಲಿನಲ್ಲಿ ಆಹಾರ ಸೇವಿಸುತ್ತಿದ್ದು, ಇಂತಹ ಘಟನೆಗಳು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ




