ಹುಬ್ಬಳ್ಳಿ, ಸೆ.14: ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಭರದ ಸಿದ್ಧತೆ ನಡೆದಿದೆ. ಮಧ್ಯಾಹ್ನ 12 ಗಂಟೆಗೆ ಮಹಾಗಣಪತಿ ಪ್ರತಿಷ್ಠಾಪನೆ ನಡೆಯಲಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮೂರು ಸಾವಿರ ಮಠದಿಂದ ರಾಣಿ ಚೆನ್ನಮ್ಮ ಮೈದಾನದವರೆಗೆ ಮಹಾಗಣಪತಿಯ ಭವ್ಯ ಮೆರವಣಿಗೆ ಸಾಗಲಿದೆ. ಮೆರವಣಿಗೆ ಮಾರ್ಗದುದ್ದಕ್ಕೂ ಎಲ್ಲ ರೀತಿಯ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಟಪ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪೊಲೀಸ್ ಪಡೆ ಕಾವಲು ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.




