ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಘಟನೆ ಬಗ್ಗೆ ಬಾಯಿ ಬಿಟ್ಟರೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ ಆರೋಪ ಇದೀಗ ಧಾರವಾಡದಲ್ಲಿ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ ಜೋಶಿ ವಿರುದ್ಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರುದಾರ ಮಹಿಳೆಯ ಆರೋಪದ ಪ್ರಕಾರ, 2022ರ ಮೇ 29ರಂದು ಧಾರವಾಡದ ಮಾಳಮಡ್ಡಿಯ ‘ಶ್ರೀ ಪೂರ್ಣ ಅಪಾರ್ಟ್‌ಮೆಂಟ್’ನಲ್ಲಿ ಗೋಪಾಲ ಜೋಶಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇಷ್ಟಕ್ಕೆ ಪ್ರಕರಣ ಮುಗಿದಿರಲಿಲ್ಲ ಎನ್ನುವುದು ಮಹಿಳೆಯ ಮತ್ತೊಂದು ಆರೋಪ. ದೌರ್ಜನ್ಯದ ಬಳಿಕವೂ ತಮಗೆ ಮಾನಸಿಕ ಹಾಗೂ ಆರ್ಥಿಕ ಕಿರುಕುಳ ನೀಡಲಾಗಿದೆ. ತಮ್ಮ ಕುಟುಂಬಕ್ಕೂ ತೊಂದರೆ ಉಂಟುಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಭಯದಿಂದ ದೂರು ನೀಡಲು ಸಾಧ್ಯವಾಗಿರಲಿಲ್ಲ. ಬಳಿಕ ಕುಟುಂಬದವರಿಗೆ ವಿಚಾರ ತಿಳಿಸಿದ ನಂತರ, ಪೊಲೀಸ್ ಠಾಣೆಗೆ ದೂರು ನೀಡುವಂತೆ ಕುಟುಂಬಸ್ಥರು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್ 6ರಂದು ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಬಿಎನ್‌ಎಸ್ ಸೆಕ್ಷನ್ 75(2) ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸದ್ಯ ಪ್ರಕರಣ ತನಿಖೆಯ ಹಂತದಲ್ಲಿದ್ದು, ಮಹಿಳೆ ಮಾಡಿರುವ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.




