ಹುಬ್ಬಳ್ಳಿ: ಕೊಳೆತ ಹಾಗೂ ಗುಣಮಟ್ಟ ಕಳೆದುಕೊಂಡ ಕೊಬ್ಬರಿಯನ್ನು ಸಂಗ್ರಹಿಸಿ, ವಿಂಗಡಿಸಿ ಅಕ್ರಮವಾಗಿ ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ಆರೋಗ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಆಹಾರವಾಗಿ ಬಳಸಲು ಯೋಗ್ಯವಲ್ಲದ ಕೊಬ್ಬರಿಯನ್ನು ಸಂಗ್ರಹಿಸಿ, ಗುಣಮಟ್ಟದ ಕೊಬ್ಬರಿಯೊಂದಿಗೆ ಬೆರೆಸಿ ಅಥವಾ ವಿವಿಧ ರೀತಿಯಲ್ಲಿ ವಿಂಗಡಿಸಿ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಸರಕುಗಳು ಗ್ರಾಹಕರ ಕೈ ಸೇರಿದರೆ ಆಹಾರದ ಗುಣಮಟ್ಟ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.
ಕೊಳೆತ ಕೊಬ್ಬರಿ ಸಂಗ್ರಹದ ಆರೋಪ: ಕೆಲವು ಸ್ಥಳಗಳಲ್ಲಿ ಗುಣಮಟ್ಟ ಕಳೆದುಕೊಂಡ ಕೊಬ್ಬರಿಯನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೊಬ್ಬರಿಯ ಸಂಗ್ರಹ, ವಿಂಗಡಣೆ, ಸಾಗಾಟ ಹಾಗೂ ಮಾರಾಟದ ಸಂಪೂರ್ಣ ಪ್ರಕ್ರಿಯೆ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ.
ಅಧಿಕಾರಿಗಳ ಪರಿಶೀಲನೆಗೆ ಆಗ್ರಹ: ಆಹಾರ ಸುರಕ್ಷತಾ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ವಾಹನ ಸಾಗಾಟದ ಸಂದರ್ಭದಲ್ಲಿ ತಪಾಸಣೆ ನಡೆಸಿ ಆಹಾರ ಇಲಾಖೆಗೆ ಮಾಹಿತಿ ನೀಡಿದರೆ FSSI ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲೇ ಕೊಬ್ಬರಿಯ ಗುಣಮಟ್ಟವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು ಎಂಬುದು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದರೆ, ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆಹಾರವಾಗಿ ಬಳಸಲು ಯೋಗ್ಯವಲ್ಲದ ಯಾವುದೇ ವಸ್ತು ಗ್ರಾಹಕರಿಗೆ ತಲುಪದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಜನರ ಆರೋಗ್ಯದ ಜೊತೆ ಚೆಲ್ಲಾಟವೇ?: ಲಾಭದ ಉದ್ದೇಶದಿಂದ ಗುಣಮಟ್ಟ ಕಳೆದುಕೊಂಡ ಅಥವಾ ಆಹಾರಕ್ಕೆ ಯೋಗ್ಯವಲ್ಲದ ಕೊಬ್ಬರಿಯನ್ನು ಮಾರುಕಟ್ಟೆಗೆ ತರುವ ಪ್ರಯತ್ನ ನಡೆಯುತ್ತಿದ್ದರೆ, ಇದು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಗಂಭೀರ ವಿಷಯವಾಗಿದೆ.
ಹೀಗಾಗಿ, ಅಧಿಕಾರಿಗಳು ಕೊಳೆತ ಕೊಬ್ಬರಿಯ ಅಕ್ರಮ ಸಂಗ್ರಹ ಸಾಗಾಟ ಮತ್ತು ಮಾರಾಟದ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ…




