ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಅಧಿಕಾರ ಹಸ್ತಾಂತರದ ಸಂಭ್ರಮ. ಕಳೆದ ಒಂದು ವಾರದಿಂದ ಇದ್ದ ವರ್ಗಾವಣೆಯ ಗೊಂದಲಕ್ಕೆ ಇಂದು ಅಂತಿಮ ತೆರೆ ಬಿದ್ದಿದೆ.
ಎನ್. ಶಶಿಕುಮಾರ್ ಅವರು ತಮ್ಮ 2 ವರ್ಷ 2 ತಿಂಗಳ ಸುದೀರ್ಘ ಸೇವೆಗೆ ವಿದಾಯ ಹೇಳಿದರು. ತಮ್ಮ ಅವಧಿಯಲ್ಲಿ ರೌಡಿಗಳು, ಗುಂಡಾಗಳಿಗೆ ಸಿಂಹಸ್ವಪ್ನವಾಗಿದ್ದ ಅವರು, ನಗರದ ಶಾಂತಿ ಕಾಪಾಡುವಲ್ಲಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದರು. ಪೊಲೀಸ್ ಸಿಬ್ಬಂದಿ ಭಾವುಕವಾಗಿ ಪುಷ್ಪಗುಚ್ಛ ನೀಡಿ ಬೀಳ್ಕೊಟ್ಟರು.
ಅದೇ ಖುರ್ಚಿಯಲ್ಲಿ ಈಗ ನೂತನ ಕಮಿಷನರ್ ಭೂಷಣ್ ಬೋರಸೆ ಕುಳಿತಿದ್ದಾರೆ. ಚಾರ್ಜ್ ತೆಗೆದುಕೊಂಡ ತಕ್ಷಣವೇ ಅವರು ಅವಳಿ ನಗರದ ಜನರ ನಾಡಿಮಿಡಿತವನ್ನು ಅರಿತಂತೆ ಮಾತನಾಡಿದರು.
“ಹುಬ್ಬಳ್ಳಿ-ಧಾರವಾಡದ ಸಮಸ್ಯೆಗಳು ನನಗೆ ಗೊತ್ತಿವೆ. ಫ್ಲೈಓವರ್ ಕಾಮಗಾರಿ ನೆನೆಗುದಿಗೆ ಬಿದ್ದು ರಸ್ತೆಗಳು ಕಿರಿದಾಗಿವೆ, ಟ್ರಾಫಿಕ್ ನರಕವಾಗಿದೆ. ಇನ್ನೊಂದೆಡೆ ಪೊಲೀಸರೇ ಎಲ್ಲೆಂದರಲ್ಲಿ ವಾಹನ ತಡೆದು ಫೈನ್ ಹಾಕುತ್ತಾರೆ, ಆದರೆ ಟ್ರಾಫಿಕ್ ನಿಯಂತ್ರಣ ಮಾಡಲ್ಲ ಎಂಬ ದೂರು ನನ್ನ ಕಿವಿಗೆ ಬಿದ್ದಿದೆ.”
“ಇನ್ನು ಮುಂದೆ ಹಾಗಲ್ಲ. ರೂಲ್ಸ್ ಎಲ್ಲರಿಗೂ ಒಂದೇ. ನಶಾ ಮುಕ್ತ ಹುಬ್ಬಳ್ಳಿ-ಧಾರವಾಡ ನನ್ನ ಮೊದಲ ಗುರಿ” ಎಂದು ಖಡಕ್ ಎಚ್ಚರಿಕೆಯನ್ನೇ ನೀಡಿದ್ದಾರೆ.
ಮೊದಲ ದಿನವೇ ಖಾಕಿ ದಂಡವನ್ನು ಬಿಗಿಗೊಳಿಸಿರುವ ನೂತನ ಕಮಿಷನರ್ ಅವಳಿ ನಗರಕ್ಕೆ ಯಾವ ಬದಲಾವಣೆ ತರುತ್ತಾರೆ ಕಾದು ನೋಡಬೇಕಿದೆ.




