ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡುವ ಹುಚ್ಚಾಟವೊಂದು ದುರಂತಕ್ಕೆ ಕಾರಣವಾಗಿದೆ. ರಾಜಸ್ಥಾನದ ಟೋಂಕ್ ಜಿಲ್ಲೆಯ ದಿಯೋಲಿ–ಟೋಂಕ್ ಹೆದ್ದಾರಿಯ ಪಾಲಿಯಾಡಾ ಬಳಿ ಗಂಟೆಗೆ ಬರೋಬ್ಬರಿ 198 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಾ ಫೇಸ್‌ಬುಕ್ ಲೈವ್ ಮಾಡುತ್ತಿದ್ದ 41 ವರ್ಷದ ರಾಜಾರಾಮ್ ಜಾಟ್ ಎಂಬುವವರು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಕೊನೆಯ ಕ್ಷಣಗಳ ದೃಶ್ಯವೂ ಲೈವ್ ವಿಡಿಯೋದಲ್ಲಿ ಸೆರೆಯಾಗಿದೆ.
ಮಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜನಕ್‌ಪುರ ತೋರ್ಡಿ ಗ್ರಾಮದ ನಿವಾಸಿಯಾಗಿದ್ದ ರಾಜಾರಾಮ್ ರೈತರಾಗಿದ್ದರು. ಇಬ್ಬರು ಮಕ್ಕಳ ತಂದೆಯಾಗಿದ್ದ ಅವರು, ಮಂಗಳವಾರ ಮುಂಜಾನೆ ದಿಯೋಲಿಯಿಂದ ಟೋಂಕ್ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮೊಬೈಲ್‌ನಲ್ಲಿ ಫೇಸ್‌ಬುಕ್ ಲೈವ್ ಆರಂಭಿಸಿ, ಕಾರಿನ ವೇಗವನ್ನು ತೋರಿಸುತ್ತಿದ್ದರು. ಲೈವ್‌ನಲ್ಲಿ ಸ್ಪೀಡೋಮೀಟರ್ 197ರಿಂದ 198 ಕಿ.ಮೀ ವೇಗ ತಲುಪಿರುವುದು ಗೋಚರಿಸಿತ್ತು ಎಂದು ವರದಿಯಾಗಿದೆ.
ಪಾಲಿಯಾಡಾ ಸಮೀಪಿಸುತ್ತಿದ್ದಂತೆ ಅತಿವೇಗದಿಂದ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, ಮುಂಭಾಗದಲ್ಲಿದ್ದ ಡಂಪರ್ ಟ್ರಕ್‌ಗೆ ಕಾರು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಾಜಾರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ರೀಲ್ಸ್, ಲೈವ್ ವಿಡಿಯೋ ಹಾಗೂ ವೇಗದ ಪ್ರದರ್ಶನಕ್ಕಾಗಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಹಾಗೂ ಅತಿವೇಗ ಎರಡೂ ಅಪಾಯಕಾರಿ ಎಂದು ಪೊಲೀಸರು ಎಚ್ಚರಿಸಿದ್ದು, ಹೆದ್ದಾರಿಗಳಲ್ಲಿ ಸ್ಪೀಡ್ ಗನ್ ಮತ್ತು ಕ್ಯಾಮೆರಾಗಳ ಮೂಲಕ ನಿಗಾ ಮತ್ತಷ್ಟು ಬಿಗಿಗೊಳಿಸುವುದಾಗಿ ತಿಳಿಸಿದ್ದಾರೆ. ಕೆಲವೇ ಸೆಕೆಂಡ್‌ಗಳ ಲೈವ್‌ಗಾಗಿ ಬದುಕನ್ನೇ ಕಳೆದುಕೊಳ್ಳುವ ಸ್ಥಿತಿ ಬರಬಾರದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.




