ನಟಿ ಶ್ರುತಿ ಹಾಸನ್ ಅವರು ಪಿರಿಯಡ್ಸ್ ವೇಳೆ ತಾವು ಅನುಭವಿಸುವ ನೋವು ಹಾಗೂ ಶೂಟಿಂಗ್ ಸೆಟ್‌ನಲ್ಲಿ ಎದುರಿಸಿದ ಅನುಭವಗಳನ್ನು ನಟಿ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
PCOS ಸಮಸ್ಯೆಯಿಂದಾಗಿ ಪಿರಿಯಡ್ಸ್ ಸಮಯದಲ್ಲಿ ತೀವ್ರ ನೋವು ಎದುರಾಗುತ್ತದೆ ಎಂದು ಹೇಳಿದ ಶ್ರುತಿ, ವೃತ್ತಿಜೀವನದ ಆರಂಭದಲ್ಲಿ ಈ ವಿಚಾರವನ್ನು ನಿರ್ದೇಶಕರಿಗೆ ಹೇಳಲು ಮುಜುಗರವಾಗುತ್ತಿತ್ತು ಎಂದಿದ್ದಾರೆ. ಬಳಿಕ ತಮ್ಮ ಪರಿಸ್ಥಿತಿಯನ್ನು ನಿರ್ದೇಶಕರಿಗೆ ತಿಳಿಸಲು ಆರಂಭಿಸಿದಾಗ, ಶೂಟಿಂಗ್ ಸಂದರ್ಭದಲ್ಲೂ ತಂಡದಿಂದ ಹೆಚ್ಚಿನ ಸಹಕಾರ ಸಿಕ್ಕಿತು ಎಂದು ಹೇಳಿದ್ದಾರೆ.
ಇದೇ ವೇಳೆ ಪಿರಿಯಡ್ಸ್ ಬಗ್ಗೆ ಇರುವ ತಪ್ಪು ಕಲ್ಪನೆಗಳ ಕುರಿತು ಮಾತನಾಡಿದ ಶ್ರುತಿ, “ಪುರುಷರಿಗೂ ಪಿರಿಯಡ್ಸ್ ಬರಲಿ ಎಂದು ನಾನು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ. ಆಗ ಪಿರಿಯಡ್ ರಜೆಯನ್ನು ಕೆಲಸದ ಒಪ್ಪಂದದಲ್ಲೇ ಸೇರಿಸಬಹುದು” ಎಂದು ತಮಾಷೆಯಾಗಿ ಹೇಳಿದ್ದಾರೆ.
ಶ್ರುತಿ ಹಾಸನ್ ಅವರು ಮುಂದಿನ ದಿನಗಳಲ್ಲಿ ‘ಟ್ರೈನ್’, ‘ಆಕಾಶಮಲ್ಲೋ ಒಕ ತಾರ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.



