ಧಾರವಾಡ: ಕೃಷಿ ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯಾಗಿರುವ ರೈತರಿಗೆ ಇದೀಗ ಸುವರ್ಣಾವಕಾಶ. ಧಾರವಾಡ ಜಿಲ್ಲೆಯ 2026-27ನೇ ಸಾಲಿನ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೃಷಿಯ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ರೈತರು 2026ರ ಅಕ್ಟೋಬರ್ 9ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ರೈತರು ತಮ್ಮ ಸಾಧನೆಯನ್ನು ದಾಖಲಿಸಿ ಪ್ರಶಸ್ತಿಗೆ ಅರ್ಹತೆ ಪಡೆಯಲು ಕೃಷಿ ಇಲಾಖೆ ಅವಕಾಶ ನೀಡಿದೆ.
ಯಾವ ಕ್ಷೇತ್ರದ ಸಾಧನೆ ಪರಿಗಣನೆ?
ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ, ವೈಜ್ಞಾನಿಕ ಕೃಷಿ ಯಂತ್ರೋಪಕರಣಗಳ ಬಳಕೆ ಸೇರಿದಂತೆ ಕೃಷಿಯ ಹಲವು ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ಕೃಷಿ ತಂತ್ರಜ್ಞಾನ, ಕೃಷಿ ಸಂಸ್ಕರಣೆ ಹಾಗೂ ಅರಣ್ಯ ಕೃಷಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರೈತರೂ ಅರ್ಜಿ ಸಲ್ಲಿಸಬಹುದು.
ಅದೇ ರೀತಿ ಆಡು, ಕುರಿ, ಮೊಲ ಸಾಕಾಣಿಕೆ, ಹಸಿರುಮನೆ, ಕಸಿ ಅಭಿವೃದ್ಧಿ, ಸಸ್ಯಕಾಶಿ ಸೇರಿದಂತೆ ವಿವಿಧ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಫಲಿತಾಂಶ ಪಡೆದಿರುವ ರೈತರ ಸಾಧನೆಯನ್ನೂ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.
ದಾಖಲೆಗಳು ಕಡ್ಡಾಯ
ರೈತರು ತಾವು ಕೈಗೊಂಡಿರುವ ಒಂದು ಚಟುವಟಿಕೆಯಡಿ ಒಂದೇ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ತಮ್ಮ ಸಾಧನೆಗೆ ಸಂಬಂಧಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಸಂಬಂಧಪಟ್ಟ ಚಟುವಟಿಕೆಯ ದಾಖಲೆಗಳ ಜೆರಾಕ್ಸ್ ಪ್ರತಿ, ಛಾಯಾಚಿತ್ರಗಳು, ಸಿ.ಡಿ., ಖರ್ಚು-ವೆಚ್ಚದ ವಿವರ, ಆದಾಯದ ಮಾಹಿತಿ, ಆರ್ಟಿಸಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಹಾಗೂ ಸಾಧನೆ ಕುರಿತು ಪ್ರಕಟವಾಗಿರುವ ಪತ್ರಿಕಾ ವರದಿಗಳ ಪ್ರತಿಗಳನ್ನು ಸಲ್ಲಿಸಬೇಕಾಗಿದೆ.
ರೈತರು ಅಳವಡಿಸಿಕೊಂಡಿರುವ ತಂತ್ರಜ್ಞಾನ ಅಥವಾ ಕೃಷಿ ವಿಧಾನವು ಪ್ರಸ್ತುತ ಕೃಷಿ ಪರಿಸ್ಥಿತಿಗೆ ಉಪಯುಕ್ತವಾಗಿರಬೇಕು. ಜೊತೆಗೆ ಇತರ ರೈತರಿಗೆ ಪ್ರೇರಣೆ ನೀಡುವಂತಿದ್ದು, ಮಾದರಿಯಾಗಿರಬೇಕು ಎಂಬುದು ಪ್ರಮುಖ ಮಾನದಂಡವಾಗಿದೆ.
ಅಕ್ಟೋಬರ್ 9 ಕೊನೆಯ ದಿನ
ಆಸಕ್ತ ರೈತರು ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದು. ತಮ್ಮ ಕೃಷಿ ಸಾಧನೆಗಳ ವಿವರವನ್ನು ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ 2026ರ ಅಕ್ಟೋಬರ್ 9ರೊಳಗೆ ಸಂಬಂಧಪಟ್ಟ ಜಂಟಿ ಕೃಷಿ ನಿರ್ದೇಶಕರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಕೊನೆಯ ಕ್ಷಣದವರೆಗೆ ಕಾಯದೆ ಅಗತ್ಯ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳುವುದು ಸೂಕ್ತ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.



