‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭವಾದ ಮೊದಲ ವಾರದಲ್ಲೇ ಮನೆಯೊಳಗೆ ಜಗಳ, ವೈಯಕ್ತಿಕ ನಿಂದನೆ ಹಾಗೂ ವಿವಾದಗಳು ಸದ್ದು ಮಾಡಿವೆ. ಮೊದಲ ನಾಮಿನೇಷನ್ ಪ್ರಕ್ರಿಯೆ ವೇಳೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಾವ್ಯ ಹಾಗೂ ಮಂಜು ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸೌಂದರ್ಯ ಶೆಟ್ಟಿ ಅವರನ್ನು ನಾಮಿನೇಟ್ ಮಾಡುವ ವೇಳೆ ಮಂಜು ‘ಕ್ಯಾರೆಕ್ಟರ್ ಲೆಸ್’ ಎಂಬ ಪದ ಬಳಸಿದ್ದಕ್ಕೆ ಕಾವ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ‘ನೀನು ಹೆಣ್ಣಲ್ಲ’ ಹಾಗೂ ‘ನೀನು ಗಂಡಸಲ್ಲ’ ಎಂಬ ವೈಯಕ್ತಿಕ ಮಾತುಗಳಿಗೂ ಜಗಳ ತಲುಪಿದೆ.
ಇದರ ಬೆನ್ನಲ್ಲೇ ಕಿರಣ್ ಶಾಸ್ತ್ರಿ ಅವರು ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ಗೆ ‘ಕೈಗೆ ಬಳೆ ಹಾಕಿಕೋ’ ಎಂದು ಹೇಳಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಕುಟುಂಬ ಸಮೇತ ನೋಡುವ ಕಾರ್ಯಕ್ರಮದಲ್ಲಿ ಇಂತಹ ಲಿಂಗ ತಾರತಮ್ಯದ ಮಾತುಗಳು ಸರಿಯೇ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.
ಈ ನಡುವೆ ಮನೆಯೊಳಗಿನ ಜಗಳ, ವೈಯಕ್ತಿಕ ನಿಂದನೆ ಹಾಗೂ ಇತರ ವಿವಾದಗಳ ಬಗ್ಗೆ ವಾರಾಂತ್ಯದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.




