ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವರೂರಿನ ಶ್ರೀ ನವಗ್ರಹ ತೀರ್ಥದಲ್ಲಿ ಶನಿವಾರ ವಿಶೇಷ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಪ್ರತಿಭಾವಂತ ಹಾಗೂ ಬುದ್ಧಿವಂತ ವಿದ್ಯಾರ್ಥಿಗಳ ವಿಶೇಷ ಸನ್ಮಾನ ಸಮಾರಂಭದ ಜೊತೆಗೆ ಜೈನ ಸಮಾಜದ ಕರುಣಾಧಾರರು ಮತ್ತು ಸಮಾಜ ಸೇವಕರಿಗೆ ಗೌರವ ಸಲ್ಲಿಸಲಾಯಿತು.
ರಾಷ್ಟ್ರಸಂತ ಆಚಾರ್ಯ ಗುಣಧರ ನಂದಿ ಮಹಾರಾಜರ ಪ್ರೇರಣಾದಾಯಕ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಜ್ಯ ಸಚಿವ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. S.D.M ಜೈನಮಠ ಟ್ರಸ್ಟ್ ವತಿಯಿಂದ A.G.M ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ:
ಕಾರ್ಯಕ್ರಮದ ಪ್ರಮುಖ ಆಕರ್ಷಣೆ ವಿದ್ಯಾರ್ಥಿ ಸನ್ಮಾನವಾಗಿತ್ತು. ಈ ಬಾರಿ SSLC, PUC ಮತ್ತು ಪದವಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವೇದಿಕೆ ಮೇಲೆ ಸನ್ಮಾನಿಸಲಾಯಿತು. ಸಂಘಟಕರ ಪ್ರಕಾರ, ಅರ್ಹ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಶೇಷ ಸೌಲಭ್ಯಗಳನ್ನು ಘೋಷಿಸಲಾಗಿದೆ. ಇದರಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಹಾಗೂ ಅಧ್ಯಯನ ಪ್ರವಾಸದ ಅವಕಾಶಗಳು ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ ಎಂ ಬಿಎ ಉಚಿತ ಸೀಟ್ ನೀಡಲಾಗಿದ್ದು ಹಾಗೂ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಚೀನ ಪ್ರವಾಸ ಟಿಕೆಟ್ ಗಳನ್ನು ನೀಡಲಾಗಿದೆ ಚೀನಾದಲ್ಲಿರುವ ತಾಂತ್ರಿಕತೆಯನ್ನು ಭಾರತಕ್ಕೆ ತರುವ ಒಂದು ಪ್ರಯತ್ನವನ್ನು ಈ ಸಂಸ್ಥೆಯು ಮಾಡುವ ನಿಟ್ಟಿನಲ್ಲಿದೆ.
ಇದೇ ವೇಳೆ ಮಕ್ಕಳಿಗಾಗಿ ಆಯೋಜಿಸಿರುವ ಪ್ರೇರಣಾದಾಯಕ ಹಿಮಾಲಯ ಯಾತ್ರೆಗೆ ಸಚಿವರು ಚಾಲನೆ ನೀಡಿದರು. ಧಾರ್ಮಿಕ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಈ ಯಾತ್ರೆ ಸಹಕಾರಿಯಾಗಲಿದೆ ಎಂದು ಸ್ವಾಮೀಜಿ ಅವರು ಆಶೀರ್ವಚನದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈನ ಮಠದ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಸಚಿವ ಯು.ಟಿ. ಖಾದರ್ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಶಿಕ್ಷಣಕ್ಕೆ ಸಮಾಜ ನೀಡುತ್ತಿರುವ ಕೊಡುಗೆ ಮಾದರಿಯಾಗಿದೆ ಎಂದು ಹೇಳಿದರು.




