ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯ ಮಾರ್ಗಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಷರತ್ತು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಲಿಂಕ್ ರಸ್ತೆಯಲ್ಲಿರುವ ಮಸೀದಿ ಬಳಿ ಗಣೇಶ ಮೆರವಣಿಗೆ ಸಾಗದಂತೆ ಪೊಲೀಸರು ಸೂಚನೆ ನೀಡಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಸ್ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದಾರೆ.
ಇನ್ಸ್ಪೆಕ್ಟರ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಣೇಶ ಮೆರವಣಿಗೆಗೆ ಮಾತ್ರ ಇಂತಹ ನಿರ್ಬಂಧ ಏಕೆ ಎಂದು ಪ್ರಶ್ನಿಸಿರುವ ಅವರು, ಕಾನೂನು ಸುವ್ಯವಸ್ಥೆ ಎಲ್ಲರಿಗೂ ಒಂದೇ ರೀತಿಯಾಗಿರಬೇಕು ಎಂದು ಒತ್ತಾಯಿಸಿದ್ದಾರೆ.
ಮೆರವಣಿಗೆಗಳು ನಿಗದಿತ ಮಾರ್ಗದಲ್ಲೇ ಸಾಗಬೇಕು ಹಾಗೂ ಯಾವುದೇ ಪ್ರಚೋದನಕಾರಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬುದು ಪೊಲೀಸರ ನಿಲುವಾಗಿದೆ. ಆದರೆ, ನಿರ್ದಿಷ್ಟ ಮಾರ್ಗಕ್ಕೆ ನಿರ್ಬಂಧ ವಿಧಿಸಿರುವ ಕ್ರಮ ಇದೀಗ ಮೈಸೂರು ಭಾಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.




