ಹುಬ್ಬಳ್ಳಿ: ಹಬ್ಬದ ಸಂಭ್ರಮದ ನಡುವೆ ಹುಬ್ಬಳ್ಳಿ ನಗರದ MRP ಬಾರ್‌ಗಳಲ್ಲಿ ಗ್ರಾಹಕರಿಂದ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ನಗರದ ಹಲವು MRP ಬಾರ್‌ಗಳಲ್ಲಿ ಬಿಯರ್ ಬಾಟಲಿ ಹಾಗೂ ಟಿನ್‌ಗಳಿಗೆ ನಿಗದಿತ MRPಗಿಂತ ₹5 ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಇದರ ಜೊತೆಗೆ, ಬಿಯರ್‌ನ್ನು ಕೂಲಿಂಗ್ ಮಾಡಿ ನೀಡುವ ಹೆಸರಿನಲ್ಲಿ ಮತ್ತೊಂದು ₹5 ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಇನ್ನು ಈ ಆರೋಪಗಳಿಗೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ವಿರುದ್ಧವೂ ಸಾರ್ವಜನಿಕರಿಂದ ಪ್ರಶ್ನೆಗಳು ಕೇಳಿಬರುತ್ತಿವೆ. MRPಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟವಾಗುತ್ತಿದ್ದರೆ, ಅದನ್ನು ತಡೆಯುವ ಜವಾಬ್ದಾರಿ ಯಾರದ್ದು? ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಹುಬ್ಬಳ್ಳಿಯ ದೇಶಪಾಂಡೆ ನಗರದ ಬಾಟಲ್ ಬಾಕ್ಸ್ MRP ಬಾರ್ನಲ್ಲಿ ಗ್ರಾಹಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ ಎನ್ನಲಾದ ವಿಡಿಯೋವೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿನ ಹೇಳಿಕೆಯಂತೆ, ₹5 ಹೆಚ್ಚುವರಿ ನೀಡಿದರೆ ಮಾತ್ರ ಬಿಯರ್ ಬಾಟಲಿ ನೀಡಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.
ಹಬ್ಬದ ಸಮಯದಲ್ಲಿ ಗ್ರಾಹಕರಿಂದ ಈ ರೀತಿಯ ಹೆಚ್ಚುವರಿ ಹಣ ವಸೂಲಿ ನಡೆಯುತ್ತಿದೆಯೇ? MRP ನಿಯಮ ಉಲ್ಲಂಘನೆಯಾಗಿದೆಯೇ? ಎಂಬುದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸ್ಪಷ್ಟಪಡಿಸಬೇಕಿದೆ.
ಗ್ರಾಹಕರ ಆರೋಪಗಳು ಸತ್ಯವೆಂದು ದೃಢಪಟ್ಟರೆ, ಅಬಕಾರಿ ಇಲಾಖೆ ಬಾರ್ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ? ಅಥವಾ ಹೆಚ್ಚುವರಿ ಹಣ ವಸೂಲಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಮುಂದಾಗುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.




